ರಾವ್, ವಿ ಕೆ ಆರ್ ವಿ
 1908 -. ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಅರ್ಥಶಾಸ್ತ್ರಜ್ಞರು. ವಿಜಯೇಂದ್ರ ಕಸ್ತೂರಿರಂಗ ವರದರಾಜಾರಾವ್ ಇವರ ಪೂರ್ಣ ಹೆಸರು. 1908 ಜುಲೈ 8 ರಂದು ಚಿದಂಬರಂನಲ್ಲಿ ಜನಿಸಿದರು. ರಾವ್ ಅವರ ಮನೆತನದವರು ಕನ್ನಡಿಗರು. ಇವರ ತಂದೆ ತಮಿಳುನಾಡು ಸರ್ಕಾರದ ನೌಕರಿಯಲ್ಲಿದ್ದರು. ತಾಯಿಯ ತೌರೂರು ಮೈಸೂರು. ರಾವ್ ಅವರ ವಿದ್ಯಾಭ್ಯಾಸ ಮದರಾಸು ಮತ್ತು ಮುಂಬಯಿಯಲ್ಲಿ ನಡೆಯಿತು. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಇವರು ಬಿ.ಎ. ಮತ್ತು ಎಂ.ಎ. ಪರೀಕ್ಷೆಗಳಲ್ಲಿ ಪ್ರಥಮ ದರ್ಜೆ ಪಡೆದರು. ಅರ್ಥಶಾಸ್ತ್ರ ಇವರ ಮುಖ್ಯ ವಿಷಯ. ಕೇಂಬ್ರಿಜ್‍ನಲ್ಲಿ ಇವರು ಭಾರತದ ರಾಷ್ಟ್ರೀಯ ವರಮಾನ ಕುರಿತು ಸಂಶೋಧನೆ ನಡೆಸಿ ಪಿಎಚ್.ಡಿ ಪಡೆದರು.

ಭಾರತಕ್ಕೆ ಮರಳಿದ ಮೇಲೆ ಇವರು ಸ್ವಲ್ಪಕಾಲ ವಾಲ್ಟೇರ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಅಧ್ಯಾಪಕರಾಗಿದ್ದು ಅನಂತರ ಅಹಮದಾಬಾದಿನ ಕಾಲೇಜೊಂದರಲ್ಲಿ ಐದು ವರ್ಷಗಳ ಕಾಲ ಪ್ರಾಚಾರ್ಯರಾಗಿದ್ದರು. ಈ ಮಧ್ಯೆ 1934-35ರಲ್ಲಿ ಒಂದು ವರ್ಷಕಾಲ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. 1942ರಲ್ಲಿ ನೇಮಕಗೊಂಡರು. ಇವರ ಪ್ರತಿಭೆ ಮತ್ತು ವಿದ್ವತ್ತನ್ನು ಗುರುತಿಸಿದ ಭಾರತದ ಕೇಂದ್ರ ಸರ್ಕಾರ ಇವರನ್ನು 1944ರಲ್ಲಿ ಅಂಕಿ ಅಂಶಗಳ ಇಲಾಖೆಯ ನಿರ್ದೇಶಕರನ್ನಾಗಿ ನೇಮಿಸಿತು. ಅನಂತರ ಇವರು ಆಹಾರ ಯೋಜನೆಯ ಸಲಹೆಗಾರರಾಗಿಯೂ ಕೆಲಸ ಮಾಡಿದರು. ಸ್ವಲ್ಪಕಾಲ ಅಮೆರಿಕದ ವಾಷಿಂಗ್‍ಟನ್ ನಲ್ಲಿ ಭಾರತ ಸರ್ಕಾರದ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸಿದರು. 1947-50ರ ವರೆಗೆ ವಿಶ್ವಸಂಸ್ಥೆಯ ಆರ್ಥಿಕ ಉಪಸಂಸ್ಥೆಯ ಅಧ್ಯಕ್ಷರಾಗಿ ಹಿಂದುಳಿದ ರಾಷ್ಟ್ರಗಳ ಅಭಿವೃದ್ದಿಗೆ ಸಂಬಂಧಿಸಿದ ಕಾರ್ಯ ಯೋಜನೆಗಳನ್ನು ರೂಪಿಸಲು ಸಹಾಯ ಮಾಡಿದರು. 

ದೆಹಲಿ ವಿಶ್ವವಿದ್ಯಾಲಯಗಳಲ್ಲಿ ಅರ್ಥಶಾಸ್ತ್ರದ ಅಧ್ಯಯನಕ್ಕಾಗಿ ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್ ಎಂಬ ಸಂಸ್ಥೆಯನ್ನೂ ಅನಂತರ ಅಭಿವೃದ್ಧಿ ವಿe್ಞÁನದ (ಡೆವಲಪ್‍ಮೆಂಟ್ ಸೈನ್ಸ್) ಅಧ್ಯಯನಕ್ಕಾಗಿ ಇನ್‍ಸ್ಟಿಟ್ಯೂಟ್ ಆಫ್ ಎಕನಾಮಿಕ್ ಗ್ರೋತ್ ಎಂಬ ಸಂಸ್ಥೆಯನ್ನೂ ಸ್ಥಾಪಿಸಿದರು. ಅನಂತರ ಇವರು ದೆಹಲಿ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು. ವಿದ್ಯಾರ್ಥಿಗಳಿಗೂ ಅಧ್ಯಾಪಕರಿಗೂ ನೇರ ಸಂಪರ್ಕವಿರುವ ಬೋಧನ ವ್ಯವಸ್ಥೆಯನ್ನು ಜಾರಿಗೆ ತಂದರು. ರಾವ್ ಸ್ವಲ್ಪ ಕಾಲ ಯೋಜನಾ ಮಂಡಳಿಯ ಸದಸ್ಯರಾಗಿಯೂ ಕೆಲಸ ಮಾಡಿದರು. 
1967ರಲ್ಲಿ ಬಳ್ಳಾರಿ ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾಗಿ ಕೇಂದ್ರ ಸರ್ಕಾರದ ಸಾರಿಗೆ ಸಚಿವರಾಗಿಯೂ ಅನಂತರ ವಿದ್ಯಾಸಚಿವರಾಗಿಯೂ ಕಾರ್ಯ ನಿರ್ವಹಿಸಿದರು. 1971 ರಲ್ಲಿ ಮತ್ತೆ ಅದೇ ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾದರು. 1972 ರಲ್ಲಿ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗಾಗಿ ಸಂಸ್ಥೆಯೊಂದನ್ನು ಬೆಂಗಳೂರಿನಲ್ಲಿ ಸ್ಥಾಪಿಸಿ ಅದರ ನಿರ್ದೇಶಕರಾದರು. 
ರಾವ್ ಅವರು ಭಾರತದಲ್ಲಿ ವರಮಾನ ತೆರಿಗೆ, ಭಾರತದ ರಾಷ್ಟ್ರೀಯ ಆದಾಯ, ಯುದ್ಧ ಮತ್ತು ಅಂತಾರಾಷ್ಟ್ರೀಯ ನಾಣ್ಯ ಯೋಜನೆ, ಸಮರೋತ್ತರದಲ್ಲಿ ರೂಪಾಯಿ, ನಿರಾಶ್ರಿತರ ಪುನರ್ ವ್ಯವಸ್ಥೆಯ ಆರ್ಥಿಕ ಸಮೀಕ್ಷೆ, ವಿಶ್ವವಿದ್ಯಾಲಯದ ಶಿಕ್ಷಣ ಹಾಗೂ ನೌಕರಿ, ಭಾರತದ ಆರ್ಥಿಕ ಅಭಿವೃದ್ಧಿ ಹಾಗೂ ವಿದೇಶಿ ಸಹಾಯ, ಶಿಕ್ಷಣ ಮತ್ತು ಮಾನವ ಸಂಪತ್ತಿನ ಸಂವರ್ಧನೆ, ಭಾರತದಲ್ಲಿ ಕೃಷಿ ಕಾರ್ಮಿಕರು ಮುಂತಾದ ಗ್ರಂಥಗಳನ್ನೂ ಆರ್ಥಿಕಾಭಿವೃದ್ಧಿ ಕುರಿತ ಅನೇಕ ಪ್ರಬಂಧಗಳನ್ನೂ ಬರೆದಿದ್ದಾರೆ. 1974ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ